ಬ್ಲಾಕ್ ಕಾಫಿ: ಬರೀ ಒಂದು ಪಾನೀಯವಲ್ಲ, ಒಂದು ಆರೋಗ್ಯಕರ ಅಭ್ಯಾಸ!

ದಿನಕ್ಕೆ ಒಂದು ಕಪ್ ಬ್ಲಾಕ್ ಕಾಫಿ ನಿಜವಾಗಿಯೂ ತೂಕ ಇಳಿಸಲು ಸಹಾಯ ಮಾಡುತ್ತದೆಯೇ? ಅಥವಾ ಅದು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮತ್ತೊಂದು ಟ್ರೆಂಡ್ ಮಾತ್ರವೇ? ಈ ಪ್ರಶ್ನೆ ಬಹಳ ಮಂದಿಗೆ ಇದೆ. ವಾಸ್ತವದಲ್ಲಿ, ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಬ್ಲಾಕ್ ಕಾಫಿ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ನೀಡಬಹುದು. ಸರಳವಾಗಿ ಹೇಳುವುದಾದರೆ, ಬ್ಲಾಕ್ ಕಾಫಿ ತೂಕ ಇಳಿಸುವ ಪ್ರಯತ್ನಕ್ಕೆ ಸ್ವಲ್ಪ ಸಹಾಯ ಮಾಡಬಹುದು; ಆದರೆ ಕಾಫಿ ಮಾತ್ರ ಕುಡಿದರೆ ತೂಕ ಕಡಿಮೆಯಾಗುವುದಿಲ್ಲ. ಆದರೆ ಅದನ್ನು ಅತಿಯಾಗಿ ಸೇವಿಸಿದರೆ ಕೆಲವು ತೊಂದರೆಗಳೂ ಉಂಟಾಗಬಹುದು. ಹಾಗಾದರೆ ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ನೋಡೋಣ.

ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಬಿಸಿ ಕಾಫಿ ಕುಡಿಯದೇ ದಿನ ಶುರುವಾಗಲ್ಲ ಅನ್ನೋರು ನಮ್ಮಲ್ಲಿ ಬಹಳ ಜನ ಇದ್ದಾರೆ. ಆದರೆ ಹಾಲು, ಸಕ್ಕರೆ ಇಲ್ಲದೆ ಕೇವಲ ಕಾಫಿ ಪುಡಿ ಮತ್ತು ನೀರಿನಿಂದ ತಯಾರಿಸುವ “ಬ್ಲಾಕ್ ಕಾಫಿ” ಕುಡಿಯುವ ಅಭ್ಯಾಸ ಇತ್ತೀಚೆಗೆ ಜಿಮ್‌ಗೆ ಹೋಗುವವರಿಂದ ಆರಂಭವಾಗಿ ಈಗ ಸಾಮಾನ್ಯ ಜನರಲ್ಲೂ ಜನಪ್ರಿಯವಾಗಿದೆ.

ಆದರೆ ನಿಜವಾಗಿಯೂ ಈ ಕಹಿ ಕಾಫಿ ದೇಹಕ್ಕೆ ಒಳ್ಳೆದೇ? ಅಥವಾ ಬರೀ ಒಂದು ಟ್ರೆಂಡ್ ಅಷ್ಟೇನಾ? ಇದನ್ನ ಸ್ವಲ್ಪ ವಿವರವಾಗಿ ನೋಡೋಣ.

ಬ್ಲಾಕ್ ಕಾಫಿ ಎಂದರೆ ಏನು?

ಸಿಂಪಲ್ ಆಗಿ ಹೇಳಿದರೆ, ಹಾಲು, ಸಕ್ಕರೆ ಅಥವಾ ಕ್ರೀಮ್ ಸೇರಿಸದೇ ಕೇವಲ ಕಾಫಿ ಪುಡಿ ಮತ್ತು ಬಿಸಿ ನೀರಿನಿಂದ ತಯಾರಿಸುವ ಕಾಫಿಯೇ ಬ್ಲಾಕ್ ಕಾಫಿ. ಮೊದಲ ಸಿಪ್‌ನಲ್ಲಿ ಸ್ವಲ್ಪ ಕಹಿ ಅನಿಸಬಹುದು, ಆದರೆ ಅದೇ ಕಹಿಯಲ್ಲಿ ಕ್ಯಾಫೀನ್, ಕ್ಲೋರೋಜೆನಿಕ್ ಆಸಿಡ್ ಸೇರಿದಂತೆ ವಿವಿಧ ಆಂಟಿಆಕ್ಸಿಡೆಂಟ್‌ಗಳು, ಜೊತೆಗೆ ಮ್ಯಾಗ್ನೀಷಿಯಂ ಮತ್ತು ಪೊಟ್ಯಾಸಿಯಂನಂತಹ ಖನಿಜಾಂಶಗಳು ಅಡಗಿವೆ. ಮತ್ತು ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ನಿಯಂತ್ರಿಸಲು ಪ್ರಯತ್ನಿಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು.

ಹಾಗಾದರೆ ಬ್ಲಾಕ್ ಕಾಫಿಯಿಂದ ಏನು ಲಾಭ?:-

1. ಮೆಟಾಬಾಲಿಸಂ ಹೆಚ್ಚಿಸಲು ಸಹಾಯ ಮಾಡಬಹುದು

ವರ್ಕೌಟ್‌ಗೆ ಹೋಗುವ ಮೊದಲು ಕೆಲವರು ಬ್ಲಾಕ್ ಕಾಫಿ ಕುಡಿಯುವುದನ್ನು ನೀವು ಗಮನಿಸಿರಬಹುದು. ಅಧ್ಯಯನಗಳ ಪ್ರಕಾರ, ಕ್ಯಾಫೀನ್ ದೇಹದ ಮೆಟಾಬಾಲಿಸಂ ಅನ್ನು ತಾತ್ಕಾಲಿಕವಾಗಿ ಸ್ವಲ್ಪ ಹೆಚ್ಚಿಸಲು ಸಹಾಯ ಮಾಡಬಹುದು. ಇದರ ಪರಿಣಾಮವಾಗಿ ವ್ಯಾಯಾಮ ಮಾಡುವಾಗ ಶಕ್ತಿ ಸ್ವಲ್ಪ ಹೆಚ್ಚಿದಂತೆ ಅನುಭವವಾಗಬಹುದು. ಆದರೆ ಇದು ತೂಕ ಇಳಿಸುವ “ಮ್ಯಾಜಿಕ್ ಡ್ರಿಂಕ್” ಅಲ್ಲ ಎಂಬುದನ್ನು ನೆನಪಿಡಬೇಕು.

2. ಮೆದುಳು ಚುರುಕಾಗಲು ಸಹಾಯ ಮಾಡುತ್ತದೆ

ಇದಕ್ಕೆ ಕಾರಣ ಕ್ಯಾಫೀನ್ ನಮ್ಮ ನರಮಂಡಲವನ್ನು ಉತ್ತೇಜಿಸುವುದು. ಇದರಿಂದ ಗಮನ, ಏಕಾಗ್ರತೆ, ಜಾಗರೂಕತೆ ಮತ್ತು ಪ್ರತಿಕ್ರಿಯೆಯ ವೇಗದಲ್ಲಿ ತಾತ್ಕಾಲಿಕ ಸುಧಾರಣೆ ಕಂಡುಬರಬಹುದು.

3. ಮನಸ್ಥಿತಿಗೆ ಸಹಕಾರಿಯಾಗಬಹುದು

ದೊಡ್ಡ ಪ್ರಮಾಣದ ಜನರನ್ನು ಒಳಗೊಂಡ ಅಧ್ಯಯನಗಳಲ್ಲಿ, ನಿಯಮಿತ ಕಾಫಿ ಸೇವನೆ ಮತ್ತು ಖಿನ್ನತೆಯ (Depression) ಅಪಾಯ ಕಡಿಮೆಯಾಗುವ ನಡುವಿನ ಸಂಬಂಧ ಕಂಡುಬಂದಿದೆ. ಆದರೆ ಕಾಫಿ ಯಾವುದೇ ರೀತಿಯ ಖಿನ್ನತೆಗೆ ಚಿಕಿತ್ಸೆಯಲ್ಲ. ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

4. ಹೃದಯ ಮತ್ತು ಲಿವರ್ ಆರೋಗ್ಯ

ಮಿತ ಪ್ರಮಾಣದ ಕಾಫಿ ಸೇವನೆ ಹೃದಯ ಮತ್ತು ಲಿವರ್ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಯೋಜನಗಳನ್ನು ಹೊಂದಿರಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಆದರೆ ಇದರರ್ಥ ಕಾಫಿ ರೋಗಗಳನ್ನು ತಡೆಯುತ್ತದೆ ಅಥವಾ ಚಿಕಿತ್ಸೆ ನೀಡುತ್ತದೆ ಎಂಬುದಲ್ಲ.

5. ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲ

ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಹಾನಿಗೊಳಿಸುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅಷ್ಟೇ ಅಲ್ಲ, ನಿಯಮಿತವಾಗಿ ಕಾಫಿ ಸೇವಿಸುವವರಲ್ಲಿ ಟೈಪ್-2 ಮಧುಮೇಹದ ಅಪಾಯ ಕಡಿಮೆಯಾಗುವ ಸಾಧ್ಯತೆಯೂ ಕಂಡುಬಂದಿದೆ. ಆದರೆ ಕಾಫಿಯನ್ನು ಮಾತ್ರ ಅವಲಂಬಿಸುವುದಕ್ಕಿಂತ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯೇ ಮುಖ್ಯ..

6. ಮೆದುಳಿನ ದೀರ್ಘಕಾಲಿಕ ಆರೋಗ್ಯ

ನಿಯಮಿತ ಕಾಫಿ ಸೇವನೆ ಮತ್ತು ಆಲ್ಝೈಮರ್ಸ್ ಹಾಗೂ ಪಾರ್ಕಿನ್ಸನ್ಸ್‌ನಂತಹ ನರಮಂಡಲ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುವ ನಡುವಿನ ಸಂಬಂಧವೂ ಕೆಲವು ಅಧ್ಯಯನಗಳಲ್ಲಿ ಕಂಡುಬಂದಿದೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

ಹೆಚ್ಚು ಕುಡಿದರೆ ಏನಾಗಬಹುದು?

ಎಲ್ಲದಕ್ಕೂ ಒಂದು ಮಿತಿ ಇರಬೇಕಲ್ವಾ? ಕಾಫಿ ಕೂಡ ಇದಕ್ಕೆ ಹೊರತಲ್ಲ. ದಿನಕ್ಕೆ ಅಗತ್ಯಕ್ಕಿಂತ ಹೆಚ್ಚು ಕುಡಿದ್ರೆ ಮೊದಲಿಗೆ ರಾತ್ರಿ ಸರಿಯಾಗಿ ನಿದ್ರೆ ಬರಲ್ಲ, ಬೆಳಗ್ಗೆ ದಣಿವು ಜಾಸ್ತಿ ಆಗುತ್ತೆ. ಜೊತೆಗೆ ಆತಂಕ, ಮನಸ್ಸಿನಲ್ಲಿ ಚಡಪಡಿಕೆ, ಹೃದಯ ಬಡಿತ ಜಾಸ್ತಿ ಆಗೋದು — ಇವೆಲ್ಲಾ ಕಾಫಿ ಜಾಸ್ತಿ ಕುಡಿದವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತೆ. ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರಬಹುದು.

ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವವರಿಗೆ ಒಂದು ದಿನ ಹಠಾತ್ ಕಾಫಿ ಬಿಡಿಸಿದರೆ ತಲೆನೋವು, ದಣಿವು ಅಥವಾ ಕಿರಿಕಿರಿ ಉಂಟಾಗಬಹುದು. ಇದನ್ನು ಕ್ಯಾಫೀನ್ ವಿತ್‌ಡ್ರಾವಲ್ (Caffeine Withdrawal) ಎಂದು ಕರೆಯಲಾಗುತ್ತದೆ.

ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ ಒಟ್ಟು ಸುಮಾರು 400 ಮಿ.ಗ್ರಾಂ ಕ್ಯಾಫೀನ್‌ವರೆಗೆ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತ ಮಿತಿಯೆಂದು ಪರಿಗಣಿಸಲಾಗುತ್ತದೆ. ಆದರೆ ಒಂದು ಕಪ್ ಕಾಫಿಯಲ್ಲಿ ಎಷ್ಟು ಕ್ಯಾಫೀನ್ ಇರುತ್ತದೆ ಎಂಬುದು ಕಾಫಿಯ ಪ್ರಕಾರ, ಪ್ರಮಾಣ ಮತ್ತು ತಯಾರಿಸುವ ವಿಧಾನವನ್ನು ಅವಲಂಬಿಸಿ ಬದಲಾಗುತ್ತದೆ. ಆದ್ದರಿಂದ ಕಪ್‌ಗಳ ಸಂಖ್ಯೆಯನ್ನು ಮಾತ್ರ ಆಧರಿಸುವ ಬದಲು, ಒಟ್ಟು ಕ್ಯಾಫೀನ್ ಪ್ರಮಾಣವನ್ನು ಗಮನಿಸುವುದು ಉತ್ತಮ. ನಿಮ್ಮ ದೇಹದ ಪ್ರತಿಕ್ರಿಯೆ ಗಮನಿಸಿ, ಅಗತ್ಯಕ್ಕೆ ತಕ್ಕಂತೆ ಕಾಫಿ ಸೇವನೆಯನ್ನು ಹೊಂದಿಸಿಕೊಳ್ಳಿ..

ಯಾವಾಗ ಕುಡಿಯೋದು ಒಳ್ಳೇದು?

ಬೆಳಗ್ಗೆ ಅಥವಾ ಮಧ್ಯಾಹ್ನ ಕುಡಿಯುವುದು ಉತ್ತಮ. ಆ ಸಮಯದಲ್ಲಿ ಕುಡಿದ್ರೆ ಎನರ್ಜಿ ಸಿಗುತ್ತೆ, ಕೆಲಸದಲ್ಲಿ ಫೋಕಸ್ ಚೆನ್ನಾಗಿರುತ್ತೆ. ಸಂಜೆ ಅಥವಾ ರಾತ್ರಿ ಮಲಗುವ ಸಮಯಕ್ಕೆ ತುಂಬಾ ಹತ್ತಿರ ಕಾಫಿ ಕುಡಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಏಕೆಂದರೆ ಕ್ಯಾಫೀನ್ ಹಲವಾರು ಗಂಟೆಗಳವರೆಗೆ ದೇಹದಲ್ಲಿ ಉಳಿಯಬಹುದು ಮತ್ತು ಕೆಲವರಲ್ಲಿ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಕೊನೆಯದಾಗಿ…

ಆರೋಗ್ಯಕರ ಜೀವನಶೈಲಿ ಎಂದರೆ ಕಾಫಿ ಕುಡಿಯುವುದು ಅಥವಾ ಬಿಡುವುದು ಮಾತ್ರವಲ್ಲ. ಯಾವ ಆಹಾರ ಅಥವಾ ಪಾನೀಯವನ್ನೇ ಆಗಲಿ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಸೇವಿಸುವುದು ಮುಖ್ಯ. ಬ್ಲಾಕ್ ಕಾಫಿಯೂ ಅದಕ್ಕೆ ಹೊರತಲ್ಲ. ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆಯೊಂದಿಗೆ ಅದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ.

ನೀವು ಬ್ಲಾಕ್ ಕಾಫಿ ಕುಡಿಯುತ್ತೀರಾ? ದಿನಕ್ಕೆ ಎಷ್ಟು ಕಪ್ ಕುಡಿಯುತ್ತೀರಿ? ನಿಮ್ಮ ಅನುಭವವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ವಿಶ್ವಾಸಾರ್ಹ ಮಾಹಿತಿಗಾಗಿ ನಮ್ಮ ಆರೋಗ್ಯ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

ಸೂಚನೆ:

ಈ ಲೇಖನ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ನೀವು ಗರ್ಭಿಣಿಯಾಗಿದ್ದರೆ, ಹೃದಯ ಸಂಬಂಧಿ ಸಮಸ್ಯೆ, ಅಧಿಕ ರಕ್ತದೊತ್ತಡ, ಆತಂಕದ ತೊಂದರೆ ಅಥವಾ ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಬ್ಲಾಕ್ ಕಾಫಿ ಸೇವನೆ ಕುರಿತು ನಿಮ್ಮ ವೈದ್ಯರ ಸಲಹೆ ಪಡೆಯುವುದು ಸೂಕ್ತ.

👉 ಇಂತಹ ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ತಪ್ಪದೇ Follow ಮಾಡಿ!

Similar Posts

Leave a Reply

Your email address will not be published. Required fields are marked *